ಗ್ಲೈಡರ್  - 
ಎಂಜಿನ್ ಚಾಲನೆ ಇಲ್ಲದ ವಾಯುವಿಮಾನ. ಇದರೊಳಗೆ ಒಬ್ಬ ಚಾಲಕ ಕುಳಿತಿರುತ್ತಾನೆ. ವಾಯುವಿಗಿಂತ ತೂಕವಾದ ವಸ್ತುವಿನಲ್ಲಿ ಕುಳಿತು ವಾಯುಮಂಡಲದಲ್ಲಿ ಹಾರಾಟ ಪ್ರಯೋಗವಾಡುವ ದಿಶೆಯಲ್ಲಿ ಮನುಷ್ಯ ಮೊದಲು ಬಳಸಿದ ಸಾಧನ ಗ್ಲೈಡರ್. ಇದ್ಕಕೆ ಎಂಜಿನ್ ಜೋಡಿಸಿ ಚಾಲನ ಸಾಮಥ್ರ್ಯವನ್ನು ಒದಗಿಸಿದಾಗ ಸಾಂಪ್ರದಾಯಿಕ ವಿಮಾನ (ಏರೋಪ್ಲೇನ್) ದೊರೆಯುತ್ತದೆ. ಬೀಸುವ ಗಾಳಿಯಲ್ಲಿನ ಶಕ್ತಿಯನ್ನು ಉಪಯೋಗಿಸಿಕೊಂಡು ಗ್ಲೈಡರ್ ವಾಯುಮಂಡಲದಲ್ಲಿ ತೇಲುತ್ತ ನಿಧಾನವಾಗಿ ಕೆಳಗಿಳಿಯಬಲ್ಲದು. ನೆಲದ ಮೇಲಿರುವ ಕೆಲವು ಯಾಂತ್ರಿಕ ಸಾಧನೆಗಳ ಮೂಲಕ ಇದನ್ನು ಗಾಳಿಪಟದಂತೆ ಭೂಮಿಯಿಂದ ಮೇಲಕ್ಕೆ ಏರಿಸಲೂಬಹುದು. ಇಂಥ ಮೇಲಕ್ಕೇರಬಲ್ಲ ಫಲಕಗಳನ್ನು ಸೇಯ್ಲ್‍ಪ್ಲೇನ್ ಎಂದೂ ಕರೆಯುವರು. ಗ್ಲೈಡರಿನ ವಿನ್ಯಾಸವನ್ನು ಈಚೆಗೆ ಬಹಳ ಅಭಿವೃದ್ಧಿ ಪಡಿಸಿರುತ್ತಾರೆ. ಸೈನ್ಯಕಾರ್ಯಾಚರಣೆಯಲ್ಲಿ ಸೈನಿಕರನ್ನು ಯುದ್ಧ ಪ್ರದೇಶಗಳಲ್ಲಿ ಇಳಿಸುವುದರಲ್ಲಿಯೂ ವಾಯುಯಾನ ಶಾಸ್ತ್ರ ಮತ್ತು ವಾಯುಲಕ್ಷಣ ಶಾಸ್ತ್ರಗಳಿಗೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಲ್ಲಿಯೂ ಗ್ಲೈಡರುಗಳನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸುವುದುಂಟು.

ಅಮೇರಿಕಾದ ಆಟೋ ಲೀಯೆಂಥಾಲ್ ಎಂಬ ವಿe್ಞÁನಿ 1867 ರಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ವಾಯುಯಾನವನ್ನು (ನೋಡಿ- ವಾಯುಯಾನ) ಸಾಧ್ಯಗೊಳಿಸಬಲ್ಲ ಕೆಲವು ಬಹುಮುಖ್ಯ ಭೌತ ಸಿದ್ಧಾಂತಗಳನ್ನು ನಿರೂಪಿಸಿದ. ತರುವಾಯ 1900 ರಲ್ಲಿ ರೈಟ್ ಸಹೋದರರು ಈ ಪ್ರಯೋಗಗಳನ್ನು ಇನ್ನೂ ತೀವ್ರವಾಗಿ ಮುಂದುವರಿಸಿ ವಾಯುಯಾನವನ್ನು ಅಪಾಯವಿಲ್ಲದಂತೆ ಮಾಡುವ ಕೆಲವು ನಿಯಂತ್ರಣ ವ್ಯವಸ್ಥೆಗಳನ್ನು ನಿರ್ಮಿಸಿದರು. ಇವುಗಳಲ್ಲಿ ಮುಖ್ಯವಾದವು ವಿಮಾನವನ್ನು ತಿರುಗಿಸುವುದಕ್ಕೆ ಚುಕಾಣಿ (ರಡ್ಡರ್), ಸುತ್ತುವಂತೆ ಮಾಡುವುದಕ್ಕೆ ಏಲೆರಾನ್ಸ್, ಹತ್ತುವಾಗ ಇಳಿಯುವಾಗ ಉಪಯೋಗಿಸುವ ಎಲೆವೇಟರ್ಸ್ ಎಂಬವು. ಮುಂದೆ ಇವರೇ ನಿರ್ಮಿಸಿದ ಎಂಜಿನ್ ಚಾಲಿತ ವಿಮಾನ ರಚನೆಗೆ ಈ ಆವಿಷ್ಕರಣಗಳು ಪೀಠಿಕೆಯಾದವು.

ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ ವಾಯುಮಂಡಲದೊಳಗೆ ಊಧ್ರ್ವಮುಖವಾಗಿ ಹರಿಯುವ ಗಾಳಿಯ ಪ್ರವಾಹಗಳು ಉತ್ಪನ್ನವಾಗುತ್ತವೆ. ಉದಾಹರಣೆಗೆ ವೇಗವಾಗಿ ಬೀಸುವ ಗಾಳಿಯನ್ನು ಬೆಟ್ಟಗುಡ್ಡಗಳು ವೇಗ ತಡೆದಾಗ ಅದು ತನ್ನ ದಿಕ್ಕನ್ನು ಬದಲಿಸಿ ಮೇಲ್ಮೊಗವಾಗಿ ಹರಿಯುತ್ತದೆ. ಬೇರೆ ಬೇರೆ ಉಷ್ಣ ವಿಭವಗಳಲ್ಲಿರುವ ಗಾಳಿಯ ಎರಡು ದೊಡ್ಡ ಭಾಗಗಳು ಪರಸ್ಪರ ಸಂಘಟಿಸಿದಾಗ ಕೂಡ ಇಂಥ ಊಧ್ರ್ವಮುಖ ಪ್ರವಾಹ ಉಂಟಾಗುತ್ತದೆ. ಸೂರ್ಯನ ಬಿಸಿಲಿನಿಂದ ಕಾದ ಭೂಮಿ ಸುತ್ತುಮುತ್ತಿನ ಗಾಳಿಯ ಉಷ್ಣತೆಯನ್ನು ಹೆಚ್ಚಿಸುವುದು. ಹೀಗೆ ಬಿಸಿಯಾದ ಗಾಳಿ ಹಗುರವಾಗಿ ಮೇಲೇರುವುದು. ಈ ಕಾರಣಗಳಿಂದ ಕೂಡ ಕೆಲವು ಪ್ರದೇಶಗಳಲ್ಲಿ ಊಧ್ರ್ವಾಭಿಮುಖವಾದ ವಾಯುವಿನ ಉಷ್ಣಪ್ರವಾಹಗಳು ಏರ್ಪಾಡಾಗುವವು. ಬಿಸಿಯಾದ ಗಾಳಿ ಮೇಲಕ್ಕೆ ಹೋಗುತ್ತ ತಣ್ಣಗಾಗುವುದು. ಆಗ ಗಾಳಿಯಲ್ಲಿ ತೇವಾಂಶ ಘನಿಸಿ ಕ್ಯುಮುಲಸ್ ಮೋಡಗಳೆಂಬ ವಿಶಿಷ್ಟ ರೀತಿಯ ಮೋಡಗಳು ಉದ್ಭವವಾಗುವುದು. ಇಂಥ ಕ್ಯುಮುಲಸ್ ಮೋಡಗಳ ಕೆಳಭಾಗದಲ್ಲಿ ಗಾಳಿಯ ಸಂಚಲನೆ ಇರುತ್ತದೆ. ಗಾಳಿಯ ಈ ಊಧ್ರ್ವ ಪ್ರವಾಹಗಳನ್ನು ಬಳಸಿಕೊಂಡು ಗ್ಲೈಡರುಗಳಲ್ಲಿ ಮೇಲೇರಿ ಬಹಳ ಹೊತ್ತು ಆಕಾಶದಲ್ಲಿ ಮೋಡಗಳ ಸಮೀಪ ತೇಲುತ್ತಿರುವುದು ಸಾಧ್ಯ. ಒಂದು ಪ್ರವಾಹದ ಸಹಾಯದಿಂದ ಮೇಲಕ್ಕೆ ಹತ್ತಿ ನಿಧಾನವಾಗಿ ವಾಯುಮಂಡಲದಲ್ಲೆ ಕೆಳಕ್ಕೆ ಜಾರುವುದು ಇಲ್ಲಿನ ತಂತ್ರ. ಆಗ ಗ್ಲೈಡರನ್ನು ಅತ್ತಲಿತ್ತ ತಿರುಗಿಸುತ್ತ ಚಾಲಕ ಇನ್ನೊಂದು ಪ್ರವಾಹವನ್ನು ಸಂಧಿಸುತ್ತಾನೆ. ಇದರ ಸಹಾಯದಿಂದ ಇನ್ನೂ ಮೇಲಕ್ಕೇರುತ್ತಾನೆ. ಇಂಥ ತಂತ್ರಗಳನ್ನು ಉಪಯೋಗಿಸಿ ಸಮುದ್ರ ಮಟ್ಟಕ್ಕಿಂತ ಮೇಲೆ 45,000' ಗಳಷ್ಟು ಎತ್ತರಕ್ಕೆ ಹಾರಿದ್ದುದೂ ಉಂಟು; 72 ಘಂಟೆಗಳಿಗಿಂತಲೂ ಹೆಚ್ಚು ಕಾಲ ತೇಲುತ್ತಿದ್ದದೂ ಉಂಟು.

ಗ್ಲೈಡರಿನಲ್ಲಿ ರೆಕ್ಕೆಗಳ ಆಕಾರ ಬಲು ಮುಖ್ಯ. ಗಾಳಿಯ ನೆಗಪು (ಲಿಫ್ಟ್) ಗರಿಷ್ಠವಾಗಿಯೂ ಕರ್ಷಣ (ಡ್ರ್ಯಾಗ್) ಕನಿಷ್ಠವಾಗಿಯೂ ಇರುವಂತೆ ವಾಯುಗತಿ ಶಾಸ್ತ್ರ ರೀತ್ಯ ರೆಕ್ಕೆಯ ಆಕಾರವನ್ನು ಇಂದು ನಿರ್ಧರಿಸಲಾಗುವುದು. ಇಂದಿನ ಗ್ಲೈಡರಿನ ರೆಕ್ಕೆಗಳ ಗಾತ್ರ 50' ಉದ್ದ, 4' ಅಗಲ ಇದೆ. ಹಿಂದಿನ ಕಾಲದಲ್ಲಿ ಪ್ಲೈವುಡ್, ದಪ್ಪ ಬಟ್ಟೆ ಮತ್ತು ಉಕ್ಕಿನ ಕೊಳವೆಗಳನ್ನು ಉಪಯೋಗಿಸಿ ಗ್ಲೈಡರಗಳನ್ನು ಕಟ್ಟುತ್ತಿದ್ದರು. ಅಲ್ಯೂಮಿನಿಯಮ್ ಹಾಳೆಗಳು ಮತ್ತು ಗಾಜಿನ ಎಲೆಗಳಿಂದ ಬಲಪಡಿಸಿದ ಪ್ಲಾಸ್ಟಿಕ್ ರೀತಿಯ ವಸ್ತುಗಳಿಂದ ಎರಕ ಹೊಯ್ದ (ಮೋಲೈಡ್ ಫೈಬರ್‍ಗ್ಲಾಸ್) ಗ್ಲೈಡರುಗಳನ್ನು ರೂಪಿಸುವ ವಿಧಾನಗಳು ಈಚೆಗೆ ಬಳಕೆಯಲ್ಲಿವೆ. 

ಗ್ಲೈಡರುಗಳಲ್ಲಿ ಬಹಳ ಎತ್ತರ, ಬಹಳ ಹೊತ್ತು ಯಶಸ್ವಿಯಾಗಿ ಹಾರಬೇಕಾದರೆ ಕೆಲವು ಉಪಕರಣಗಳ ಸಹಾಯ ಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾದವು ಎತ್ತರ ಮತ್ತು ವೇಗವನ್ನು ಸೂಚಿಸುವ ಮಾಪಕಗಳು. ಗ್ಲೈಡರಿನ ತಿರುವು ಮತ್ತು ಸುತ್ತುಗಳನ್ನು ಸೂಚಿಸುವ ಸಾಧನಗಳು, ಹತ್ತುವ ಇಳಿಯುವ ವೇಗ ಪ್ರಮಾಣ ಸೂಚಕಗಳು ಮತ್ತು ವಾಯುಪ್ರವಾಹವನ್ನು ಗುರುತಿಸಿ ಅದರ ಲಕ್ಷಣಗಳನ್ನು ತಿಳಿಸುವ ಮಾಪಕಗಳು. ಪ್ರಾರಂಭದಲ್ಲಿ ಗ್ಲೈಡರ್ ಮೇಲಕ್ಕೆ ಹತ್ತುವಂತೆ ಮಾಡಲು ನೆಲದ ಮೇಲೆ ಅದನ್ನು ಸ್ವಲ್ಪ ದೂರ ಬಹಳ ವೇಗವಾಗಿ ಓಡಿಸಬೇಕಾಗುತ್ತದೆ. ಇದಕ್ಕೋಸ್ಕರ ಗ್ಲೈಡರಿಗೆ ನೈಲಾನ್ ಹಗ್ಗವನ್ನು ಕಟ್ಟಿ ಜೀಪುಗಳಿಂದ ವೇಗವಾಗಿ ಎಳೆಸುವರು. ವಿಂಚ್ ಎಂಬ ದೊಡ್ಡರಾಟೆಯುಳ್ಳ ಯಂತ್ರದಿಂದಲೂ ಗ್ಲೈಡರ್‍ಗಳನ್ನು ಎಳೆಯಬಹುದು. ಇಂದು ವಾಯುವಿಮಾನಗಳನ್ನು (ಏರೋಪ್ಲೇನ್ಸ್) ಉಪಯೋಗಿಸಿ ಗ್ಲೈಡರುಗಳನ್ನು ಆಕಾಶದಲ್ಲಿ ತೇಲಿ ಬಿಡುವುದೇ ಬಹಳ ಬಳಕೆಯಲ್ಲಿರುವ ವಿಧಾನ.
(ಬಿ.ಪಿ.ಜಿ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ